ಗುರುವಾರ, ಫೆಬ್ರವರಿ 25, 2010

ಕಾಜಾಣದಲ್ಲಿ "ಮಂಗಟ್ಟೆ"

ಕಾಜಾಣದಲ್ಲಿ "ಮಂಗಟ್ಟೆ"



ಮೊನ್ನೆ ಎರಡು ವಾರದ ಹಿಂದೆ ವಿಜಯ ಕರ್ನಾಟಕದಲ್ಲಿ ಹಾರ್ನಬಿಲ್ ಬಗ್ಗೆ ವಿಶ್ವೇಶ್ವರ ಭಟ್ಟ್ ಅವರ ಲೇಖನ ಬಂದಿತ್ತು. ಹಾರ್ನಬಿಲ್ ಎಂಬ ಪಕ್ಷಿಯ ಬಗ್ಗೆ ವಿವರವಾಗಿ ಬರೆದಿದ್ದರು. ನಮ್ಮ ಮಲೆನಾಡಿನಲ್ಲಿ  "ಮಂಗಟ್ಟೆ" ಅಥವಾ "ಕೊಕ್ಕನಕ್ಕಿ" ಅಂತ ಕರೆಯುತ್ತಾರೆ ಈ ಹಕ್ಕಿಯನ್ನು. ಕನ್ನಡ ನಾಡಿನ ಅಪರೂಪದ ಹಕ್ಕಿ ಆದ ಇದು ಅಪ್ಪಟ ಮಲೆನಾಡಿನಲ್ಲಿ ಆಗ್ಗಾಗ್ಗೆ ಕಾಣ ಸಿಗುತ್ತದೆ. ಭಟ್ಟರ ಈ ಲೇಖನ ಮತ್ತು ಈ ಹಕ್ಕಿ ಎಂದೂ ಎಲ್ಲೂ ಬರೆಯದ ನನನ್ನು ನನ್ನ ಅನುಭವವನ್ನು ಬರೆಯ ಬೇಕೆಂದು ಪ್ರೇರೇಪಿಸಿತು.



"ಹಾರ್ನಬಿಲ್" ಎಂಬ ಹೆಸರು ನನಗೆ ಬಹಳ ಇಷ್ಟವಾದ ಹೆಸರು. ಬಹುಶ ನಾನು ಪಕ್ಷಿ ವೀಕ್ಷಣೆ ಶುರು ಮಾಡಿದಾಗಿನಿಂದ ನನಗೆ ಆಪ್ತವಾಗಿದೆ. ನಾನು BNHS ನದಸ್ಯನಗಿದ್ದಾಗ "ಹಾರ್ನಬಿಲ್" ಎಂದು ಪತ್ರಿಕೆ ಬರುತ್ತಿತ್ತು. ಈ ಪತ್ರಿಕೆ ಹೆಸರಿನಿಂದ ನಾನು ಆಕರ್ಷಿತನಾದೆ, ನನ್ನ ಇನ್ನೊಂದು ಈ ಮೇಲ್ ವಿಳಾಸಕ್ಕೆ ಈ ಹೆಸರನ್ನು ಇಟ್ಟುಕೊಂಡಿದ್ದೇನೆ. ತೇಜಸ್ವಿಯವರ ಕಾರ್ವಾಲೋ ಕಾದಂಬರಿಯಲ್ಲಿ ಇದರ ಬಗ್ಗೆ ಕ್ವಚಿತ್ತಾಗಿ ಬರೆದು ಕುತೂಹಲ ಕೆರಳಿಸಿದ್ದರು.



ನಾನು ಮತ್ತು ಪ್ರಸಾದ ಪಕ್ಷಿ ವೀಕ್ಷಣೆ ಅಂತ ಕಾಡು ಮೇಡು ಅಲೆಯುತ್ತಿರುವಾಗ ಒಮ್ಮೆ ಶೃಂಗೇರಿ ಬಳಿ ಬೂದು ಬಣ್ಣದ ಹಾರ್ನಬಿಲ್ ಕಂಡಿದ್ದೆವು. ಮೇರ್ತಿ ಪರ್ವತದ ಬಳಿ ಚಿಟ್ಟೆ ಸಂಗ್ರಹಣೆಗೆ ಅಂತ ಟಿಕಾಣಿ ಹೂಡಿದ್ದಾಗ  ಒಂದು ದಿನ ಸಂಜೆ ಕಾಡಲ್ಲಿ ಯಾರೋ ಇದ್ದಕ್ಕಿಂದಂತೆ ನಕ್ಕಂತಾಯಿತು. ಸ್ವಲ್ಪ ಸಮಯದ ನಂತರ ಆ ನಗು ಕಾಡೆಲ್ಲ ತುಂಬಿ ಹೋಯಿತು. ಸಂಜೆಯ ಗೌ ಎನ್ನುವ ಕತ್ತಲಲ್ಲಿ ಯಾರಪ್ಪ ಇದು ನಗುತ್ತ ಇರೋದು ಅಂತ ಹುಡುಕಾಡಿದ ನಂತರ ತಿಳಿಯಿತು ಇದು ಮಂಗಟ್ಟೆಯ ಕೂಗು ಅಂತ, ಆದರೆ ಸಂಜೆಗತ್ತಲಗಿದ್ದರಿಂದ ದರ್ಶನವಾಗಲಿಲ್ಲ. ಮಾರನೆಯ ದಿನ "ಆನೆ ಮುಖದ ಗುಡ್ಡ " ಹತ್ತಲು ಹೊರಟಾಗ ಮಾರ್ಗ ಮಧ್ಯದ ದಟ್ಟ ಕಾಡಿನಲ್ಲಿ ಇವುಗಳ ಒಂದು ಗುಂಪೇ ಎದುರಾಯಿತು. ಯಾವುದೊ ಕಾಡು ಮರದ ಹಣ್ಣು ತಿನ್ನುತ್ತ ನಕ್ಕಂತೆ ಶಬ್ದ ಮಾಡುತ್ತ ಇದ್ದವು. ಬೂದು ಬಣ್ಣದ ಮೈ ಕೊಕ್ಕು ಸ್ವಲ್ಪ ಕಪ್ಪಗಿದ್ದು ನೋಡಲು ಆಕರ್ಷಕವಗಿದ್ದವು ಆದರೆ ಮರದ ತುದಿಯಲ್ಲಿ ಕುಳಿತಿದ್ದರಿಂದ ಸರಿಯಾಗಿ ಗಮನಿಸುವುದಕ್ಕೆ ಆಗಲಿಲ್ಲ. ಫೋಟೋ ತೆಗೆಯಲು ಆಗ ನಮ್ಮ ಬಳಿ ಆಗ ಕ್ಯಾಮರ ಇರಲಿಲ್ಲ. ಅಂದೇ ಕೊನೆ ಮತ್ತೆಂದು ಅವುಗಳನ್ನು ನೋಡಲಾಗಲಿಲ್ಲ, ಹದಿನಾಲ್ಕು ವರ್ಷಗಳ ನಂತರವೂ ಅವುಗಳ ಕಲರವ ದೇನಿಸುತ್ತಿದ್ದಿನಿ.



ಪಕ್ಷಿ ವೀಕ್ಷಣೆ ಅಂತ ನಾನು ನನ್ನ ಸ್ನೇಹಿತ ಪ್ರಸಾದ ಬಹಳಷ್ಟು ಕಾಡು ಅಲೆದಿದ್ದೇವೆ. ಆದರೆ ಆಗ ನಮ್ಮಲಿ ಕ್ಯಾಮೆರ ಅಗಲಿ ಅಥವಾ ಬೈನಾಕುಲರ್ ಅಗಲಿ ಇರಲ್ಲಿಲ್ಲ. ಸಾಮಾನ್ಯವಾಗಿ ನಾವು ವೀಕ್ಷಣೆಗೆ ಅಂತ ಹೋಗುತ್ತಿದ್ದುದು ಸಕಲೇಶಪುರದಲ್ಲಿ ನಮ್ಮ ಮನೆ ಎದುರಿಗೆ ಇದ್ದ ಕಾಫಿ ತೋಟಕ್ಕೆ ಮತ್ತು ನನ್ನ ಅಜ್ಜನ ಮನೆ ತೋಟಕ್ಕೆ. ಸಾಕಷ್ಟು ಅಪರೂಪದ ಪಕ್ಷಿಗಳನ್ನು ಅಲ್ಲಿ ಕಂಡಿದ್ದೇವೆ. ಅವುಗಳ ಫೋಟೋ ತೆಗೆಯಬೇಕೆಂದು ಯೋಜನೆ ಹಾಕಿಕೊಳ್ಳುತಿದ್ದೆವು. ಆಗಿನ್ನೂ Digital ಫೋಟೋಗ್ರಫಿ ಕಾಲಿಡುತ್ತಿದ್ದ ಕಾಲ ನಾವಿನ್ನು ಆರ್ಥಿಕವಾಗಿ ಸ್ವತಂತ್ರರಗಿರಲಿಲ್ಲ. ಕ್ಯಾಮರ ನಮಗೆ ಕೈಗೆ ಎಟುಕುವ ವಸ್ತು ಆಗಿರಲಿಲ್ಲ.  ಆಗೊಮ್ಮೆ ಪ್ರಸಾದ ಹಾಸನದಿಂದ Nikon  ಬೈನಾಕುಲರ್ ತಂದಿದ್ದ. ಅದರ ಗುಣ ವಿಶೇಷತೆಗಳನ್ನು ಕಂಡು ನಾನು Nikon  ಕ್ಯಾಮರವನ್ನೇ ಕೊಂಡುಕೊಳ್ಳಬೇಕೆಂದು ನಿರ್ಧರಿಸಿದ್ದೆ. ಆದರೆ ಅದು ಕಾರ್ಯಗತವಾಗಲು ಹತ್ತು ವರ್ಷ ಕಾಯಬೇಕಾಯ್ತು. ನನ್ನ ಮದುವೆಯ ನಂತರೆ ಹೆಂಡತಿಗೆ ಈ ವಿಷಯವಾಗಿ ಆಗಾಗ ಕೊರೆಯುತ್ತಿದ್ದೆ.  ಅಂತು ಕ್ಯಾಮೆರ ಮತ್ತು ಲೆನ್ಸ್ ಕೊಂಡಿದ್ದಾಯ್ತು, ಅದರ ಗುಣ ವಿಶೇಷತೆ ಮತ್ತು ಕಾರ್ಯವೈಖರಿಯನ್ನು ಹೊಗಳಿ ಅವಳನ್ನು ಕರೆದುಕೊಂಡು ಬೆಂಗಳೂರಿನ ಸುತ್ತಮುತ್ತ ಹಕ್ಕಿಗಳ ಫೋಟೋ ತೆಗೆಯಲು ಒಂದೆರಡು ಕಡೆ ಹೋಗಿದ್ದೆ. ಅವಳು ನಿಧಾನವಾಗಿ ವೀಕ್ಷಣೆ ಮತ್ತು ಫೋಟೋಗ್ರಫಿಯಲ್ಲಿ ಆಸಕ್ತಿವಹಿಸಿದಳು. ಶ್ರೀನಗರದ ನಮ್ಮ ಮನೆಯ ಟೆರೆಸಿನಲ್ಲಿ ಅವಳು barbet ಮತ್ತು oriole ನ ಅಪರೂಪದ ಫೋಟೋ ತೆಗೆದಿದ್ದಾಳೆ. ವಸ್ತುತಃ ಅವಳು ನನಗಿಂತ ಒಳ್ಳೆ ಫೋಟೋಗ್ರಾಫಾರ್ ಆಗಿದ್ದಾಳೆ.



ಮಲಬಾರ್ ಪೈಡ್ ಹಾರ್ನಬಿಲ್, ಕನ್ನಡದಲ್ಲಿ ದಾಸ ಮಂಗಟ್ಟೆ ನೋಡಿದ್ದು ಇನ್ನು ವಿಶೇಷ. ಅದಕ್ಕೆ ಸಾಕ್ಷಿ ನನ್ನ ಶ್ರೀಮತಿ. ನಾನು ಮತ್ತು ನನ್ನ ಹೆಂಡತಿ ಒಮ್ಮೆ ಕೊಲ್ಲೂರಿಗೆ ಹೋಗಿದ್ದೆವು. ಕೊಲ್ಲೂರಿನಿಂದ ಕುಂದಾಪುರಕ್ಕೆ ಬಸ್ಸಿನಲ್ಲಿ ಹೊರಟಿದ್ದೆವು, ಬಹುಷಃ ವಂಡ್ಸೆ ಹತ್ತಿರ ಇರಬೇಕು ಬಸ್ಸು ಒಂದು ತಿರುವಿನಲ್ಲಿ ಸ್ವಲ್ಪ ನಿದಾನವಗೆ ಚಲಿಸಿತು ಆಗ ಮಿಂಚಂತೆ ಒಂದು ದೊಡ್ಡ ದಾಸ ಮಂಗಟ್ಟೆ ಒಂದು ಮರದಿಂದ ಹಾರಿತು. ತಕ್ಷಣ ನಾನು ಹೆಂಡತಿಗೆ ತೋರಿಸಿದೆ. ಅಂದು ಕೈಯಲ್ಲಿ ಕ್ಯಾಮೆರ ಇದ್ದರು ಫೋಟೋ ತೆಗೆಯಲಾಗಲಿಲ್ಲ. ಆ ಪ್ರವಾಸದಲ್ಲೇ ಕೊಡಚಾದ್ರಿಯಲ್ಲಿ Imperial Green Pegion ಫೋಟೋ ಸ್ವಲ್ಪದರಲ್ಲಿ ತೆಗೆಯಲಾಗಲಿಲ್ಲ. 

ಇನ್ನೊಮ್ಮೆ ಕೊಲ್ಲೂರಿಗೆ ಹೋಗಿದ್ದಾಗ ಅದೇ ಜಾಗದಲ್ಲಿ ಬಸ್ಸಿನಲ್ಲಿ ಹೋಗುತಿದ್ದಾಗ ನನ್ನ ಹೆಂಡತಿಗೆ ಹಿಂದೊಮ್ಮೆ ಮಂಗಟ್ಟೆ ನೋಡಿ ಫೋಟೋ ತೆಗೆಯಲಾಗದೆ ಕೈ ಕೈ ಹಿಸಿದುಕೊಂಡಿದ್ದು ಜ್ನ್ಯಾಪಿಸಿದೆ. ಸ್ವಲ್ಪ ಸಮಯದ ನಂತರ ಕಾಫಿಗೆಂದು ಬಸ್ ನಿಲ್ಲಿಸಿದರು. ಬಿಸಿಲಿನ ಧಗೆ ತಾಳಲಾಗದೆ ಸೋಡಾ ಕುಡಿಯೊನೆಂದು ಕೆಳಗೆ ಇಳಿದೆವು. ತಂಪಾಗಿ ದಕ್ಷಿಣ ಕನ್ನಡದ ಲೋಕಲ್ ಪಾನೀಯ ಹೀರುತಿದ್ದಾಗ ಮಂಗಟ್ಟೆಯ ದರ್ಶನ ಇನ್ನೊಮ್ಮೆ ಆಯಿತು ಆದರೆ ಕ್ಯಾಮರ ಬಸ್ಸಿನ ಒಳಗಡೆ ಬ್ಯಾಗಿನಲ್ಲಿತ್ತು. ಮತ್ತೊಮ್ಮೆ ನಾವು ನಿರಾಶರಾಗಿ ಹಿಂತಿರುಗಬೇಕಾಯ್ತು . ಅದರೂ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಪ್ರಯತ್ನಿಸಲು ಕೊಲ್ಲೂರಿಗೆ ನಾಳೆಯೇ ಹಿಂತಿರುಗುವಂತೆ ಯೋಜನೆ ಹಾಕಿಕೊಂಡೆವು. ಯೋಜನೆಗೆ ಉತ್ಸಾಹ ತುಂಬಲು ಹಿಂದೊಮ್ಮೆ ನಾನು ಆಗುಂಬೆ ಕೊಲ್ಲೂರು ರಸ್ತೆಯಲ್ಲಿ ಕಡವೆ ಹಿಂಡನ್ನು ಕಂಡದ್ದು ಹೆಂಡತಿಗೆ ಕೊರೆಯಬೇಕಯ್ತು.

ಮಂಗಟ್ಟೆಯ ಫೋಟೋ ತೆಗೆಯುವ ಆಸೆಯನ್ನು ಬನ್ನೇರುಘಟ್ಟದಲ್ಲಿ ತೀರಿಸಿಕೊಂಡೆವು. ಪಂಜರದಲ್ಲಿ ಬಂದಿಸಿದ್ದ ಹಕ್ಕಿಯ ಫೋಟೋ ತೆಗೆದೆವು. ಅದೇ ಫೋಟೋವನ್ನು ಇಲ್ಲಿ ಕೊಟ್ಟಿದ್ದೇನೆ. ಆದರೂ ಸ್ವತಂತ್ರವಾಗಿರುವ ಮಂಗಟ್ಟೆಯ ಫೋಟೋ ತೆಗೆಯುವ ಯೋಜನೆ (ಪಂಚ ವಾರ್ಷಿಕ?) ಇನ್ನೂ ಚಾಲ್ತಿಯಲ್ಲಿದೆ.




ನಮ್ಮ ಫೋಟೋಗಳನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿರಿ:
http://www.flickr.com/photos/nsmskp/
http://www.flickr.com/photos/29759525@N05/

ಕಾಮೆಂಟ್‌ಗಳಿಲ್ಲ: